ಬಾಳೆ
ಸೈಟ್ಯಾಮಿನೀ ವರ್ಗದ ಮ್ಯೂಸೇಸೀ ಕುಟುಂಬಕ್ಕೆ ಸೇರಿದ ಪ್ರಸಿದ್ಧ ಜನಪ್ರಿಯ ಫಲಸಸ್ಯ (ಬನಾನ, ಪ್ಲಾಂಟನ್). ಜಾತಿಯ ವೈಜ್ಞಾನಿಕ ಹೆಸರು ಮ್ಯೂಸ. ಇದರಲ್ಲಿ ಹಲವಾರು ಪ್ರಭೇದಗಳಿವೆ. ಕೆಲವು ಪ್ರಭೇದಗಳ ಹಣ್ಣುಗಳಲ್ಲಿ ಬೀಜಗಳು ತುಂಬಿದ್ದು ಅವು ಖಾದ್ಯಯೋಗ್ಯವಾಗಿಲ್ಲ. ಮತ್ತೆ ಕೆಲವುಗಳ ಹಣ್ಣುಗಳು ತಿನ್ನುವುದಕ್ಕೂ ತರಕಾರಿಯಾಗಿ ಉಪಯೋಗಿಸುವುದಕ್ಕೂ ಯೋಗ್ಯವಾಗಿವೆ. ಭಾರತದಲ್ಲಿ 14 ಪ್ರಭೇದಗಳನ್ನು ಗುರುತಿಸಲಾಗಿದೆ. ಕೆಲವು ಪ್ರಭೇದಗಳನ್ನು ಪರದೇಶಗಳಿಂದ ತರಿಸಿ ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಬೆಳೆಸಲಾಗಿದೆ. 

ಉಷ್ಣವಲಯದ ಬಲು ಮುಖ್ಯ ಫಲಸಸ್ಯಗಳಲ್ಲಿ ಒಂದಾದ ಇದು ಆ ಪ್ರದೇಶದಲ್ಲಿಯ ಬಹುಪಾಲು ಜನರ ನಿತ್ಯೋಪಯೋಗಿ ಖಾದ್ಯವಸ್ತು. ಕೆಲವಡೆಗಳಲ್ಲಿ ಇದು ಆಹಾರದ ಮುಖ್ಯ ಸಾಮಗ್ರಿಯೇ ಆಗಿದೆ. ಉಷ್ಣವಲಯದ ಎಲ್ಲ ತೆರನ ಪರಿಸ್ಥಿತಿಗಳಲ್ಲೂ ಇದರ ಬೆಳೆಯನ್ನು ಕಾಣಬಹುದು. ಬೇರೆ ವಿಧದ ಹಣ್ಣುಗಳನ್ನು ಬೆಳೆಯಲಾರದಂಥ ಶುಷ್ಕ ಪ್ರದೇಶಗಳಲ್ಲೂ ನೀರಾವರಿ ಸೌಲಭ್ಯವಿದ್ದರೆ ಇದನ್ನು ಸರಾಗವಾಗಿ ಬೆಳೆದು ವರ್ಷವಿಡೀ ಫಲ ಪಡೆಯಬಹುದು. ಮನುಷ್ಯ ಮೊತ್ತ ಮೊದಲು ಕೃಷಿಗೆ ಒಳಪಡಿಸಿದ ಸಸ್ಯಗಳಲ್ಲಿ ಇದು ಕೂಡ ಒಂದು ಎಂದು ಭಾವಿಸಲಾಗಿದೆ. ಇದರ ಬೇಸಾಯ ಯಾವಾಗ ಆರಂಭವಾಯಿತೆಂದು ನಿಖರವಾಗಿ ಹೇಳಲುಬಾರದು. ಉತ್ತರ ಅಮೆರಿಕ ಹಾಗೂ ಐರೋಪ್ಯ ಮಾರುಕಟ್ಟೆಗಳಿಗೆ ಇದು ಬರಲು ಬಲು ಮುಂಚೆಯೇ ಉಷ್ಣವಲಯದ ವ್ಯವಸಾಯರಂಗದಲ್ಲಿ ಮುಖ್ಯಪಾತ್ರ ವಹಿಸಿತ್ತೆಂದು ಹೇಳಲಾಗಿದೆ. ವರ್ಷದ ಎಲ್ಲ ಶ್ರಾಯಗಳಲ್ಲೂ ಸಮಪ್ರಮಾಣದಲ್ಲಿ ಬೀಳುವ ಮಳೆಯಿರುವಂಥ ಪ್ರದೇಶಗಳಲ್ಲಿ, ವಿವಿಧರೀತಿಯ ನೆಲಗಳಲ್ಲಿ ಹಾಗೂ ಉಷ್ಣತೆ 100 ಸೆ ಗಿಂತ ಕಡಿಮೆ ಆಗದಿರುವಂಥ ಸ್ಥಳಗಳಲ್ಲಿ ಬಾಳೆ ಹುಲುಸಾಗಿ ಬೆಳೆದು ಅಧಿಕ ಇಳುವರಿ ಕೊಡುತ್ತದೆ. ಇದನ್ನು ಹೆಚ್ಚು ಶ್ರಮವಿಲ್ಲದೆ, ಕಂದುಗಳ ಮೂಲಕ ಬೆಳೆಯಬಹುದು. ಬರಿಯ ಹಣ್ಣುಗಳಲ್ಲದೆ, ಇತರ ಉಪಯುಕ್ತ ಉತ್ಪನ್ನಗಳನ್ನೂ ಇದರಿಂದ ಪಡೆಯಬಹುದು. ಬಾಳೆ ತನ್ನ ಉಪಯುಕ್ತತೆಯಿಂದಾಗಿ, ಉಷ್ಣವಲಯದ ಎಲ್ಲ ದೇಶಗಳಲ್ಲೂ ಇದ್ದು ಅಲ್ಲಿಯ ಹೊಲ ಮನೆಗಳ ಆವರಣದ ಮುಖ್ಯ ಅಂಗವಾಗಿದೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಸಾಗಣೆಯ ಸೌಲಭ್ಯಗಳನ್ನು ಉತ್ತಮ ಗೊಳಿಸಿ, ಹೆಚ್ಚಿಸಿರುವುದರಿಂದ ಐರೋಪ್ಯ ಹಾಗೂ ಅಮೆರಿಕ ಜನರಿಗೆ ಬಾಳೆ ಸುಲಭವಾಗಿ ಸಿಗುವಂತಾಗಿದೆ. ಮಧ್ಯ ಅಮೆರಿಕ, ವೆಸ್ಟ್ ಇಂಡೀಸ್, ಕ್ಯಾನರಿ ದ್ವೀಪಗಳು, ಬ್ರಟಿಷ್ ಹಾಗೂ ಫ್ರೆಂಚ್ ಕ್ಯಾಮರೂನ್ಸ್ ಇತ್ಯಾದಿ ದೇಶಗಳ ರಪ್ತು ವ್ಯಾಪಾರದಲ್ಲಿ ಬಾಳೆ ಬಲು ಮುಖ್ಯ ಸಾಮಗ್ರಿ. 

ಬಾಳೆ ಜಾತಿಯ ವರ್ಗೀಕರಣ ಮುಂತಾದ ವಿವರಗಳು ಬಹಳ ಚರ್ಚಾಸ್ಪದ ವಿಷಯಗಳು. ಬಾಳೆಯಗಿಡಗಳ ಬಾಹ್ಯಲಕ್ಷಣಗಳನ್ನೋ ಹಣ್ಣುಗಳು ತಿನ್ನಲು ಯೋಗ್ಯವೇ ಅಲ್ಲವೇ ಎಂಬ ಅಂಶವನ್ನೋ ಅವಲಂಬಿಸಿ ಬಾಳೆಯ ಜಾತಿಯನ್ನು ಪ್ರಭೇದಗಳಾಗಿ ವಿಂಗಡಿಸುವ ಕ್ರಮ ಬಲುಕಾಲ ಇತ್ತು. ಅನಂತರ ಕ್ರೋಮೊಸೋಮ್ ಸಂಖ್ಯೆ ಆಧರಿಸಿ ವರ್ಗೀಕರಿಸುವ ಪದ್ಧತಿ ಜಾರಿಗೆ ಬಂತು. ಇದರ ಪ್ರಕಾರ ಕ್ರೋಮೊಸೋಮುಗಳ ಏಕಗುಣಿತ (ಹ್ಯಾಪ್ಲಾಯಿಡ್) ಸಂಖ್ಯೆ 9 ಇರುವಂಥದು ಎನ್‍ಸೀಟ್ ಜಾತಿಯೆಂದೂ ಸಂಖ್ಯೆ 10 ಅಥವಾ 11 ಇರುವಂಥದು ಮ್ಯೂಸ ಜಾತಿಯೆಂದೂ ಬಗೆಯಲಾಯಿತು. ಆದರೆ ಇತ್ತೀಚಿಗಿನ ಅಧ್ಯಯನಗಳ ಫಲವಾಗಿ ಇವೆರಡು ಜಾತಿಗಳೂ ಮ್ಯೂಸ ಎಂಬ ಒಂದೇ ಜಾತಿಯ ಎರಡು ಉಪಜಾತಿಗಳೆಂದು ಪರಿಗಣಿತವಾಗಿದ್ದು ಎನ್‍ಸೀಟ್ ಎಂಬುದನ್ನು ಫೈಸೊಕಾಲಿಸ್ ಎಂಬ ಹೆಸರಿನಿಂದಲೂ ಮ್ಯೂಸವನ್ನು ಮ್ಯೂಸ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮೊದಲನೆಯದು ಒಂದೇ ಕಂದು ಉಳ್ಳಂಥದು. ಇದು ವಾಣಿಜ್ಯ ದೃಷ್ಟಿಯಿಂದ ಅಮುಖ್ಯ. ಎರಡನೆಯದು ಹಲವಾರು ಕಂದುಗಳನ್ನು ಉತ್ಪಾದಿಸುವಂಥ ಉಪಜಾತಿ. ವಾಣಿಜ್ಯ ದೃಷ್ಟಿಯಿಂದ ಮುಖ್ಯವಾಗಿರುವ ಇದೇ ನಿಜವಾದ ಬಾಳೆಯೆನಿಸಿಕೊಂಡಿವೆ. ಹಲವಾರು ಬಾಹ್ಯಲಾಕ್ಷಣಿಕ ವ್ಯತ್ಯಾಸಗಳ ಆಧಾರದ ಮೇಲೆ ಮ್ಯೂಸ ಉಪಜಾತಿಯನ್ನು ಈ ಮುಂದಿನಂತೆ ವಿಂಗಡಿಸಲಾಗಿದೆ: 1. ಮ್ಯೂಸ ಅಥವಾ ಯೂಮ್ಯೂಸ: ಇದರ ಕ್ರೋಮೊಸೋಮ್ ಸಂಖ್ಯೆ (ಹ್ಯಾಪ್ಲಾಯಿಡ್) 11; ಭಾರತದಿಂದ ಹಿಡಿದು ಜಪಾನ್ ತನಕ ವ್ಯಾಪ್ತÀವಾಗಿದೆ. 2. ರೋಡೊಕ್ಲಾಮಿಸ್: ಇದರ ಕ್ರೋಮೊಸೋಮ್ ಸಂಖ್ಯೆಯೂ 11; ಭಾರತದಿಂದ ಹಿಡಿದು ಇಂಡೊಚೀನದವರೆಗೆ ವ್ಯಾಪ್ತಿ. 3. ಆಸ್ಟ್ರೇಲಿಮ್ಯೂಸ: ಇದರ ಕ್ರೋಮೊಸೋಮ್ ಸಂಖ್ಯೆ 10; ಆಸ್ಟ್ರೀಲಿಂiÀi ದ ಕ್ವೀನ್ಸ್ ಲೆಂಡಿನಿಂದ ಹಿಡಿದು ಫಿಲಿಪೀನ್ಸ್ ವರೆಗಿನ ಪ್ರದೇಶದಲ್ಲಿ ಬೆಳೆಯುತ್ತದೆ. 4. ಕ್ಯಾಲಿಮ್ಯೂಸ: ಇದರ ಕ್ರೋಮೊಸೋಮ್ ಸಂಖ್ಯೆಯೂ 10; ಇಂಡೊನೇಷ್ಯ, ಇಂಡೊಚೀನಗಳಲ್ಲಿ ಕಾಣದೊರೆಯುತ್ತದೆ. 

	ವಾಣಿಜ್ಯ ದೃಷ್ಟಿಯಿಂದ ಪ್ರಮುಖವೆನಿಸಿದ್ದು ಕೃಷಿಮಾಡಲಾಗುತ್ತಿರುವ ಎಲ್ಲ ಬಾಳೆ ಪ್ರಭೇದಗಳೂ ತಳಿಗಳೂ ಮ್ಯೂಸ ಗುಂಪಿಗೆ ಸೇರಿವೆ. ಇದೇ ಉಳಿದೆಲ್ಲ ಗುಂಪುಗಳಿಗಿಂತ ಅತಿದೊಡ್ಡದು. ಭೌಗೋಳಿಕವಾಗಿ ಹೆಚ್ಚು ವ್ಯಾಪ್ತಿಯುಳ್ಳದ್ದು. ಈ ಗುಂಪಿನ ಮುಖ್ಯ ಪ್ರಭೇದಗಳೆಂದರೆ ಮ್ಯೂಸ ಅಕ್ಯೂಮಿನೇಟ, ಮ್ಯೂಸ ಬಾಲ್ಬಿಸಿಯಾನ ಹಾಗೂ ಮ್ಯೂಸ ಪ್ಯಾರಡೈಸಿಯಾಕ. ಮೊದಲೆರಡು ಪ್ರಭೇದಗಳ ಹಣ್ಣುಗಳಲ್ಲಿ ಬೀಜಗಳಿರುವುವಾದರೆ, ಕೊನೆಯದರ ಹಣ್ಣುಗಳು ಬೀಜ ರಹಿತ. ತಜ್ಞರ ಪ್ರಕಾರ ಬೀಜರಹಿತ ಖಾದ್ಯ ಯೋಗ್ಯ ಹಣ್ಣುಗಳನ್ನು ಉತ್ಪಾದಿಸುವ ಈ ಪ್ರಭೇದ ಮೊದಲೆರಡು ಪ್ರಭೇದಗಳ ನಡುವಣ ಸಂಕರದಿಂದಲೂ ಕ್ರೋಮೊಸೋಮ್ ಸಂಖ್ಯೆಯ ಬಹುಗುಣಿತತೆಯಿಂದಲೂ ಉದ್ಭವಿಸಿದೆ. ಇಂದು ತಿನ್ನಲು ಬಳಸುವ ಬಾಳೆಯ ಉಗಮಸ್ಥಾನ ಪೂರ್ವ ಏಷ್ಯ (ಅಸ್ಸಾಮ್, ಬರ್ಮ, ಮಲಯ, ಥಾಯ್ಲೆಂಡ್, ಇಂಡೊಚೀನ) ಎಂದು ಬಗೆಯಲಾಗಿದೆ. ಇವುಗಳ ಪೈಕಿ ಮಲಯವನ್ನು ಪ್ರಾಥಮಿಕ ಕೇಂದ್ರವೆಂದು ಭಾರತವನ್ನು ಆನುಷಂಗಿಕ ಕೇಂದ್ರವೆಂದೂ ಪರಿಗಣಿಸಲಾಗಿದೆ.

	ಆಸ್ಟ್ರೇಲಿಮ್ಯೂಸ ಗುಂಪಿಗೆ ನಾರಿಗಾಗಿ ಬೆಳೆಸುವ ಟೆಕ್ಸ್ ಟೈಲಿಸ್ (ಮರಬಾಳೆ, ಮನಿಲ ಸಣಬು)ಪ್ರಭೇದ ಸೇರಿದೆ. ರೋಡೊಕ್ಲಾಮಿಸ್ ಮತ್ತು ಕ್ಯಾಲಿಮ್ಯೂಸ ಗುಂಪುಗಳು ಕೇವಲ ಅಲಂಕಾರ ಪ್ರಾಮುಖ್ಯವಿರುವ ಕೆಲವು ಪ್ರಭೇದಗಳನ್ನು ಒಳಗೊಂಡಿವೆ. 

	ಅಕ್ಯೊಮಿನೇಟ ಪ್ರಭೇದ 3-7 ಮೀ ಎತ್ತರಕ್ಕೆ ಬೆಳೆಯುವ ಸಸ್ಯ. ಅಸ್ಸಾಮ್, ಬರ್ಮ, ಶ್ರೀಲಂಕಾ, ಥಾಯ್ಲೆಂಡ್, ಮಲೇಷ್ಯ, ಆಸ್ಟ್ರೇಲಿಯ, ಫಿಲಿಪೀನ್ಸ್ ಹಾಗೂ ದಕ್ಷಿಣ ಭಾರತಗಳಲ್ಲಿ ಕಾಣದೊರೆಯುತ್ತದೆ. ಇದರ ಹಣ್ಣುಗಳ ತಿರುಳು ಬಿಳಿ ಇಲ್ಲವೆ ಹಳದಿ, ಇದರಲ್ಲಿ ಬೀಜ ರಹಿತ ಹಾಗೂ ಬೀಜಯುಕ್ತ ತಳಿಗಳುಂಟು. ಇದರ ಮುಖ್ಯ ತಳಿಗಳು: ಬಸ್ರಾಯ್ (ವಾಮನ್ ಕೇಲಿ), ಹರಿಚಲ್, ಚಕ್ಕರಕೇಲಿ, ಲಾಲ್‍ಕೇಲಿ (ಚೆನ್‍ಕದಳಿ ಅಥವಾ ಸೆವ್ವಾಳೆ), ವೆನ್‍ಕದಳಿ, ಚಿಂಗನ್, ಮತ್ತಿ ಇತ್ಯಾದಿ, ಮಹಾರಾಷ್ಟ್ರ ಹಾಗೂ ತಮಿಳುನಾಡುಗಳು ಇದರ ಕೃಷಿಗೆ ಪ್ರಸಿದ್ಧ. ಇದರಲ್ಲಿ ಕಾಡುಬಗೆಗಳೂ ಉಂಟು. 

	ಬಾಲ್ಬಿಸಿಯಾನ ಪ್ರಭೇದ ಸುಮಾರು 6 ಮೀ ಎತ್ತರಕ್ಕೆ ಬೆಳೆಯುವಂಥದು. ಅಸ್ಸಾಮ್, ಸಿಕ್ಕಿಮ್, ದಕ್ಷಿಣ ಭಾರತ, ಬರ್ಮ, ಚೀನ, ಫಿಲಿಪೀನ್ಸ್, ಶ್ರೀಲಂಕಾಗಳಲ್ಲಿ ಬೆಳೆಯುತ್ತದೆ. ಉಳಿದ ಬಗೆಗಳಿಗಿಂತ ಇದು ಹೆಚ್ಚು ಸದೃಢವಾದ್ದು; ರೋಗರುಜಿನಗಳಿಗೆ ಸುಲಭವಾಗಿ ಬಲಿಯಾಗದು. ಇದರ ಕಾಯಿಗಳನ್ನು ತರಕಾರಿಯಾಗಿ ಬಳಸುವುದಿದೆ. ಎಲೆಗಳನ್ನು ಊಟದ ಎಲೆಗಳಾಗಿ ಉಪಯೋಗಿಸುತ್ತಾರೆ. ಎಳವಾಳೈ, ಕಲ್ಲುಬಾಳೆ ಮುಂತಾದವು ಇದರ ವಿವಿಧ ಬಗೆಗಳು. ಇದರ ಹಣ್ಣುಗಳಲ್ಲಿ ಕರಿಯಬಣ್ಣದ ಗುಂಡನೆಯ ಬೀಜಗಳುಂಟು.

	ಖಾದ್ಯಯೋಗ್ಯ ಹಣ್ಣುಗಳನ್ನು ಬಿಡುವ ಮ್ಯೂಸ ಪ್ಯಾರಡೈಸಿಯಾಕ ಪ್ರಭೇದವೇ ವಾಣಿಜ್ಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದ್ದು. ಮೊದಲೇ ಹೇಳಿದಂತೆ ಇದು ಸಂಕರತಳಿ. ಹಳೆಯ ವರ್ಗೀಕರಣ ಪದ್ಧತಿ ಪ್ರಕಾರ ಖಾದ್ಯ ಯೋಗ್ಯ ಹಣ್ಣುಗಳುಳ್ಳ ಬಾಳೆಯ ತಳಿಗಳನ್ನು ಮ್ಯೂ. ಪ್ಯಾರಡೈಸಿಯಾಕ (ಇದರ ಕಾಯಿಗಳನ್ನು ತರಕಾರಿಯಾಗಿ ಬಳಸಲಾಗುವಂಥ ತಳಿ-ಇಂಗ್ಲಿಷಿನಲ್ಲಿ ಪ್ಲಾಂಟನ್) ಮತ್ತು ಮ್ಯೂ. ಸೇಪಿಯೆಂಟಮ್ (ಇದರ ಫಲಗಳನ್ನು ಮಾಗಿಸಿ ಹಣ್ಣುಗಳ ರೂಪದಲ್ಲಿ ತಿನ್ನುವಂಥ ತಳಿ-ಇಂಗ್ಲಿಷಿನಲ್ಲಿ ಬನಾನ) ಎಂದು ವಿಂಗಡಿಸಲಾಗಿತ್ತು. ಆದರೆ ಇವೆರಡರ ನಡುವಣ ವ್ಯತ್ಯಾಸಗಳು ಕೃತಕವಾದುವಾದ್ದರಿಂದ ಈಗ ಎರಡನ್ನೂ ಒಟ್ಟಿಗೆ ಸೇರಿಸಿ ಪ್ಯಾರಡೈಸಿಯಾಕೆ ಎಂಬ ಒಂದೇ ಪ್ರಭೇದವಾಗಿ ಮಾಡಲಾಗಿದೆ. 

	ಬಾಳೆಗಿಡ ಬಹುವಾರ್ಷಿಕ ಶಾಕ ಅಥವಾ ಔಷಧಿಗಳ (ಹರ್ಬ್) ಗುಂಪಿಗೆ ಸೇರಿದ ಸಸ್ಯ. ಇದರ ನಿಜವಾದ ಕಾಂಡ ನೆಲದೊಳಗೆ ಹುದುಗಿರುವ ಪ್ರಕಂದ (ರೈಜೋಮ್). ಇದರ ಮೇಲೆ ಅನೇಕ ಪಾಶ್ರ್ವಾಂಕುರಗಳಿದ್ದು ಅವು ಒಂದೊಂದರಿಂದಲೂ ಒಂದೊಂದು ನೆಲದಿಂದ ಮೇಲಕ್ಕೆ ಬರುವ ಕಾಂಡಗಳು ಮೂಡುವುವು. ಇವುಗಳ ಪೈಕಿ ಒಂದು ಉಳಿದವಕ್ಕಿಂತ ಪ್ರಬಲವಾಗಿ ಬೆಳೆದು ಪ್ರಧಾನಕಾಂಡವಾಗುತ್ತದೆ. ಉಳಿದವೆಲ್ಲ ಕಂದುಗಳೆನಿಸಿಕೊಳ್ಳುತ್ತವೆ. ಪ್ರಕಂದದಿಂದ ತಂತುಬೇರುಗಳು ಹುಟ್ಟುತ್ತವೆ. ಇವು ನೆಲದೊಳಕ್ಕೆ ಆಳವಾಗಿಯಾಗಲೀ ವಿಸ್ತಾರವಾಗಿಯಾಗಲೀ ಬೆಳೆಯವು. ಬಾಳೆಗೆ ಅದರ ಗಾತ್ರವನ್ನು ಹೋಲಿಸಿದರೆ ಬೇರು ಸಮೂಹ ಕಡಿಮೆಯೆಂದೇ ಹೇಳಬೇಕು. ಇದರಿಂದಾಗಿ ಬಾಳೆ ಗಾಳಿಯ ರಭಸವನ್ನು ತಡೆದುಕೊಳ್ಳದು. ಅಂತೆಯೇ ಬಾಳೆ ತೋಟಗಳಲ್ಲಿ ಪ್ರತಿ ಗಿಡಕ್ಕೂ ಆಸರೆ ಕೊಡುವ ಕ್ರಮ ಇದೆ. ಪ್ರಧಾನ ಕಾಂಡ ಬೇರೆ ಸಸ್ಯಗಳ ಕಾಂಡಗಳಂತಲ್ಲ. ಅನೇಕ ಎಲೆಗಳ ತೊಟ್ಟುಭಾಗ ಒಂದರ ಮೇಲೊಂದು ವರಸೆವರಸೆಯಾಗಿ ಸೇರಿಕೊಂಡು ಉರುಳೆಯಾಕಾರದ ಕಂಬದಂತೆ ರೂಪುಗೊಂಡಿರುವ ರಚನೆ. ಎಂದೇ ಇದಕ್ಕೆ ಮಿಥ್ಯಾಕಾಂಡ (ಸೂಡೋಸ್ಟೆಮ್) ಎಂದು ಹೆಸರು. ಇದು ತಳಿ ಅವಲಂಬಿಸಿ ಎರಡು ಮೀಟರಿನಿಂದ ಹಿಡಿದು ಹತ್ತು ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಇದರ ವ್ಯಾಸ ಸುಮಾರು 20-30 ಸೆಂಮೀ. ಕಾಂಡದ ಮಧ್ಯದಿಂದ ಹೊಸ ಹೊಸ ಎಲೆಗಳು ಹೊರಬಂದು ಚೆಲುವಾದ ಕಿರೀಟದಂತೆ ಅರಳುತ್ತದೆ. ಒಳಗಿನಿಂದ ಬರುವಾಗ ಗಟ್ಟಿಯಾಗಿ ಸುರುಳಿಗೊಂಡಿದ್ದರೂ ಹೊರಬಂದ ಮೇಲೆ ವಿಸ್ತಾರಗೊಳ್ಳುವ ಇವುಗಳಲ್ಲಿ ಪ್ರತಿಯೊಂದರಲ್ಲೂ ಎದ್ದು ಕಾಣುವ ಮಧ್ಯನಾಳವೂ ಇದರಿಂದ ಹೊರಟಂತೆ ಅಲಗಿನಲ್ಲಿ ಸಮಾಂತರವಾಗಿ ಜೋಡಣೆಗೊಂಡಿರುವ ಪಾಶ್ರ್ವ ನಾಳಗಳೂ ಇವೆ. ಬರಬರುತ್ತ ಗಾಳಿಗೆ ಸಿಲುಕಿ ಇವುಗಳ ಅಲಗು ಅಲ್ಲಲ್ಲಿ ಹರಿದು ಕೊಳ್ಳುವುದೂ ಉಂಟು. ಎಲೆಗಳ ಬಣ್ಣ ಗಾಢ ಹಸುರು. ಕೆಲವು ತಳಿಗಳಲ್ಲಿ ಕಾಂಡದ ಮೇಲೆ ಬೂದಿ ಬಣ್ಣದ ಮೇಣದಂಥ ಲೇಪ ಇರುತ್ತದೆ. 

	ಒಂದು ಗಿಡಕ್ಕೆ ಒಂದೇ ಒಂದು ದೊಡ್ಡ ಹೂಗೊಂಚಲು ಬರುತ್ತದೆ. ಹೂಗೊಂಚಲು ಅರಳುವ ಸೂಚನೆ ಅದು ಬರುವ ಮೊದಲು ಹುಟ್ಟುವ ಎಲೆಗಳು ಚಿಕ್ಕ ಗಾತ್ರದವಾಗುವುದು. ಹೂಗೊಂಚಲಿನ ತೊಟ್ಟು ಭೂಗತ ಕಾಂಡದಿಂದಲೇ ಹೊರಟು ಗಿಡದ ತುದಿಯಲ್ಲಿ ಬಾಗಿ ನಸುಕೆಂಪು ಇಲ್ಲವೇ ಊದಾ ಬಣ್ಣದ ಅನೇಕ ವೃಂತಪತ್ರಗಳಿಂದ ಆವೃತವಾಗಿರುತ್ತದೆ. ಇದಕ್ಕೆ ಬಾಳೆ ಮೋತೆ ಎಂದು ಹೆಸರು. (ಸಸ್ಯ ಶಾಸ್ತ್ರೀಯವಾಗಿ ಸ್ಪೇಡಿಕ್ಸ್). ಪ್ರತಿ ವೃಂತಪತ್ರದ ಒಳ ಆವರಣದಲ್ಲಿ ಅನೇಕ ಹೂ ಇರುವುವು. ತಳಿಗಳನ್ನು ಅವಲಂಬಿಸಿ ಇವುಗಳ ಸಂಖ್ಯೆ ಹೆಚ್ಚು ಕಡಿಮೆ ಇರುತ್ತದೆ. ಹೂಗೊಂಚಲು ಬೆಳೆಯುತ್ತ ಹೋದಹಾಗೆ ವೃಂತಪತ್ರ ಸಡಿಲವಾಗಿ ಮೇಲೆ ಎತ್ತಿಕೊಳ್ಳುತ್ತದೆ. ಪ್ರತಿ ವೃಂತಪತ್ರದಿಂದ ಆವೃತವಾದ ಹೂಗಳ ಸಮೂಹಕ್ಕೆ ಚಿಪ್ಪು ಎಂದು ಹೆಸರು. ಇಡೀ ಗೊಂಚಲೇ ಗೊನೆ. ಗೊನೆಯ ಕೆಳಭಾಗದಲ್ಲಿ ಹೆಣ್ಣು ಹೂಗಳೂ ಮಧ್ಯಭಾಗದಲ್ಲಿ ದ್ವಿಲಿಂಗಿ ಹೂಗಳೂ ತುದಿಭಾಗದಲ್ಲಿ ಗಂಡು ಹೂಗಳೂ ಇರುವುವು. ಹೆಣ್ಣು ಹೂಗಳಿಂದಲೇ ಮುಂದೆ ಕಾಯಿಗಳು ಬಿಡುವುದು. ಹೆಣ್ಣು ಹೂಗಳಲ್ಲಿ ಕೇಸರಗಳಿದ್ದರೂ ಅವು ಪರಾಗರಹಿತ. ಹೂಗಳು ಬಲಿತಂತೆ ವೃಂತಪತ್ರಗಳು ಬೀಳುತ್ತ ಹೋಗುವುವು. 

	ಪ್ರತಿ ಹೂವಿನಲ್ಲಿ ಆರುದಳಗಳು ಎರಡು ವೃತ್ತಗಳಲ್ಲಿ ಅಂದರೆ ಒಂದೊಂದು ವೃತ್ತದಲ್ಲಿ ಮೂರರಂತೆ ಇರುತ್ತವೆ. ಆರುಕೇಸರಗಳುಂಟು. ಅಂಡಾಶಯ ನೀಚ ಸ್ಥಾನದ್ದು; ಮೂರು ಕಾರ್ಪೆಲ್ಲುಗಳಿಂದ ರಚಿತವಾಗಿದೆ. ಒಳಗೆ ಮೂರು ಕೋಣೆಗಳುಂಟು. ಪ್ರತಿ ಕೋಣೆಯಲ್ಲಿ ಮಧ್ಯದಿಂಡಿಗೆ ಅಂಟಿಕೊಂಡಿರುವ ಅಂಡಕಗಳಿವೆ. ಗಂಡುಹೂಗಳ ಪರಾಗಕ್ಕೆ ನಿಷೇಚನ ಸಾಮಥ್ರ್ಯವಿಲ್ಲ. ಇದರಿಂದಾಗಿ ಬಾಳೆ ಕಾಯಿ ಕಚ್ಚುವುದು ಪಿತೃರಹಿತವಿಧಾನದಿಂದ. ಅಂತೆಯೇ ಬಾಳೆಹಣ್ಣಿನಲ್ಲಿ ಬೀಜಗಳಿರುವುದಿಲ್ಲ. ಫಲ ಬೇರೆ ಮಾದರಿಯದು. ಉದ್ದವಾಗಿ, ನಸುಬಾಗಿದಂತಿದೆ. ಇದರ ಅಡ್ಢಸೀಳಿಕೆ ವೃತ್ತಾಕಾರ. ಪ್ರತಿ ಹಣ್ಣಿನಲ್ಲಿ ಮಂದವಾದ ಇಲ್ಲವೆ ತೆಳುವಾದ ಸಿಪ್ಪೆ, ಪಿಷ್ಟದಿಂದ ಕೂಡಿದ ತಿರುಳು (ಹಣ್ಣು ಮಾಗಿದಂತೆ ಇದರ ಕೊಂಚ ಭಾಗ ಸಕ್ಕರೆಯಾಗಿ ಪರಿವರ್ತಿಕವಾಗಿ ಸಿಹಿಯಾಗುತ್ತದೆ) ಉಂಟು. ಅಲ್ಲಲ್ಲಿ ಕರಿಯ ಬಣ್ಣದ ಚುಕ್ಕೆಗಳಂತಿರುವ ಬೀಜಗಳನ್ನು ಕಾಣಬಹುದು. 

	ಭಾರತದಲ್ಲಿ ಸುಮಾರು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಎಕರೆಯಲ್ಲಿ ಈ ಬೆಳೆಯಿದೆ. ಇದರ ಮೂರರಲ್ಲಿ ಎರಡರಷ್ಟು ಪ್ರದೇಶ ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಪಶ್ಚಿಮ ಬಂಗಾಳದಲ್ಲಿದೆ. ಪಳನಿ, ವೈನಾಡು, ನೀಲಗಿರಿ ಬೆಟ್ಟಗಳ ತಪ್ಪಲುಗಳಲ್ಲಿಯೂ 800 ಮೀ ಎತ್ತರದವರೆಗೆ ಅಸ್ಸಾಮಿನಲ್ಲಿಯೂ ಬೆಳೆಯುವುದು. ಈ ಬೆಟ್ಟಪ್ರದೇಶಗಳಲ್ಲಿ ಬಾಳೆಗೆ ಮಳೆಯ ನೀರೇ ಆಧಾರ. ಹೆಚ್ಚು ಮಳೆ ಸುರಿಯದಿರುವ ಭಾಗಗಳಲ್ಲಿ ಬಾವಿ, ಕಾಲುವೆ ನೀರು ಉಪಯೋಗಿಸಿ ಬೆಳೆ ತೆಗೆಯುವರು. ಬಾಳೆಯ ಎಲೆಗಳು ಉದ್ದವಾಗಿ ಅಗಲವಾಗಿರುವುದರಿಂದ ಇವುಗಳಿಂದ ವಿಶೇಷವಾಗಿ ಬಾಷ್ಪ ವಿಸರ್ಜನೆಯಾಗುತ್ತದೆ. ಈ ಕಾರಣದಿಂದ ಬಾಳೆ ಬೆಳೆಗೆ ನೀರು ಹೆಚ್ಚಾಗಿ ಬೇಕಾಗುತ್ತದೆ. 

	ಅನೇಕ ಬಗೆಯ ಮಣ್ಣುಗಳಲ್ಲಿ ಬಾಳೆ ಬೆಳೆಯುತ್ತದೆ. ಫಲವತ್ತಾದ, ಸಾಕಷ್ಟು ತೇವವಿರುವ, ನೀರು ನಿಲ್ಲದೆ ಹರಿದು ಹೋಗಲು ಅನುಕೂಲ ಮಾಡಿರುವ ಭೂಮಿಯಲ್ಲಿ ಹುಲುಸಾಗಿ ಬೆಳೆದು ಉತ್ಕøಷ್ಟ ಫಲ ನೀಡುತ್ತದೆ. ತೀರ ಪ್ರದೇಶದ ಮರಳು ಮಿಶ್ರಭೂಮಿ, ನೊರಜು ಕಲ್ಲಿನಿಂದ ಕೂಡಿದ ಕೆಂಪುಮಣ್ಣು, ಮಿಶ್ರಭೂಮಿ, ಕಪ್ಪು ಭೂಮಿ ನೀರು ನಿಲ್ಲದೆ ಹರಿದು ಹೊಗಲು ಕ್ರಮಕೈಕೊಂಡಿರುವ ಜೇಡಿಮಣ್ಣಿನ ಭೂಮಿ, ಕಪ್ಪು ಭೂಮಿ ಇವುಗಳಲ್ಲಿಯೂ ನೀರಿನ ಸೌಕರ್ಯವಿದ್ದರೆ ಉತ್ತಮ ಫಸಲು ತೆಗೆಯಬಹುದು. ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಬತ್ತದ ಗದ್ದೆಗಳಲ್ಲಿ ಇದನ್ನು ಬೆಳೆಯುವುದಿದೆ. 

	ಕಾಯಿಗಳು ಉರುಟಾಗಿ ಅವುಗಳ ಪೈಕಿ ಒಂದೊ ಎರಡೊ ಹಳದಿ ಬಣ್ಣವನ್ನು ತಳೆದಾಗ ಗೊನೆಯನ್ನು ಕತ್ತರಿಸುವುದಿದೆ. ಬಳಿಕ ಗಿಡವನ್ನು ಬುಡಕ್ಕೆ ಕತ್ತರಿಸಿ ಒಳಗಿರುವ ದಿಂಡನ್ನು ತೆಗೆದು ತರಕಾರಿಯಾಗಿ ಬಳಸುವುದುಂಟು. 

	ಗೊಂಚಲುಗಳನ್ನು ಕತ್ತರಿಸಿ ಕಾಯಿಗಳು ಹಣ್ಣಾಗಲು ಮತ್ತು ರುಚಿಯಾಗಲು ಬಿಡುವರು. ಗೊನೆಗಳನ್ನು ನೇತು ಹಾಕಿದರೆ ಅದರಲ್ಲಿಯ ಎಲ್ಲ ಕಾಯಿಗಳು ಮಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಕೋಣೆಗಳಲ್ಲಿ ತುಂಬಿ, ಹೊಗೆಗೆ ಒಡ್ಡಿ ಮಾಗಿಸುವುದೂ ಉಂಟು. ಹೀಗೆ ಶಾಖ ಕೊಟ್ಟ ಮೂರು ನಾಲ್ಕು ದಿವಸಗಳಲ್ಲಿ ಹಣ್ಣುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. 

	ಬಾಳೆಯ ಕೆಲವು ಮುಖ್ಯ ಪ್ರಭೇದಗಳು: ವಾಣಿಜ್ಯ ದೃಷ್ಟಿಯಿಂದ ಬಾಳೆಯ ಅನೇಕ ತಳಿಗಳನ್ನು ಬೆಳೆಸಲಾಗಿದೆ. ಒಂದೇ ಪ್ರಭೇದದ ಹಣ್ಣುಗಳ ರುಚಿ ಮತ್ತು ಗಾತ್ರದಲ್ಲಿಯ ವ್ಯತ್ಯಾಸ, ಬೆಳೆಯುವ ಮಣ್ಣು ಹವಾಗುಣಗಳನ್ನು ಅವಲಂಬಿಸಿವೆ. ಕರ್ನಾಟಕದಲ್ಲಿ ಬೆಳೆಯುವ ಕೆಲವು ಮುಖ್ಯ ಪ್ರಭೇದಗಳು ಇಂತಿವೆ:

	ಮದರಂಗ ಬಾಳೆ: ಇದರ ಕಾಯಿ ರುಚಿಯಾದ ತರಕಾರಿ. ಹಣ್ಣನ್ನು ಇಷ್ಟ ಪಡುವವರು ಕಡಿಮೆ. ಮಾಗಿದ ಹಣ್ಣಿನ ತಿರುಳು ಹಳಿದಿ ಬಿಳಿ ಮಿಶ್ರ ಬಣ್ಣದ್ದು. ರುಚಿಯಾಗಿರುತ್ತದೆ. ಒಂದು ಗೊನೆಯಲ್ಲಿ 50-60ಕ್ಕಿಂತ ಹೆಚ್ಚು ಕಾಯಿಗಳಿರುವುದಿಲ್ಲ. ಗಿಡದ ಎತ್ತರ 2.5-3 ಮೀ. 

	ರಸಬಾಳೆ: ಮೈಸೂರಿನ ರಸಬಾಳೆಯನ್ನು ಮೆಚ್ಚದವರಿಲ್ಲ. ಹಣ್ಣಿನ ಸ್ವಾದ ಅಷ್ಟು ಪ್ರಿಯ. ಹಣ್ಣು ಹೆಚ್ಚು ಮಾಗಿ ಹೊರಸಿಪ್ಪೆ ಕಪ್ಪು ಬಣ್ಣಕ್ಕೆ ತಿರುಗಿದರೂ ತಿರುಳು ಕೆಲವು ದಿವಸಗಳು ಕೆಡುವುದಿಲ್ಲ. ಮೈಸೂರು ಜಿಲ್ಲೆಯ ಅನೇಕ ಕಡೆ ಇದನ್ನು ಬೆಳೆದರೂ ನಂಜನಗೂಡು ತಾಲ್ಲೂಕಿನಲ್ಲಿ ಬೆಳೆಯುವ ರಸಬಾಳೆಗೆ ಹೆಚ್ಚು ಪ್ರಾಶಸ್ತ್ಯ. ಗೊನೆಯಲ್ಲಿ 60-70 ಹಣ್ಣುಗಳಿರುತ್ತವೆ.

	ಗೂಳೂರು ಬಾಳೆ: ಇದು 3-4 ಮೀ ಎತ್ತರ ಬೆಳೆಯುತ್ತದೆ. ಗೊನೆಯಲ್ಲಿ 100ಕ್ಕಿಂತ ಹೆಚ್ಚು ಹಣ್ಣುಗಳಿರುವುವು. ಹಣ್ಣು 10-12 ಸೆಂಮೀ ಉದ್ದವಿದ್ದು ದಪ್ಪವಾಗಿರುತ್ತವೆ. ಇದರ ಸಿಪ್ಪೆ ಮಂದ. 

	ಏಲಕ್ಕಿ ಬಾಳೆ: ಕಂಬ ಸಣ್ಣದು. ಗಿಡ ಎತ್ತರಕ್ಕೆ ಬೆಳೆಯುತ್ತದೆ. ಹಣ್ಣುಗಳ ಉದ್ದ 7-10 ಸೆಂಮೀ. ಹಣ್ಣಿನ ಸಿಪ್ಪೆ ತೆಳು. ಮಾಗಿದ ಹಣ್ಣುಗಳನ್ನು ಒಂದು ವಾರಕ್ಕೂ ಹೆಚ್ಚು ಕಾಲ ಸಂಗ್ರಹಿಸಿಡಬಹುದು. ಒಂದು ಗೊನೆಯಲ್ಲಿ 150 ಕ್ಕೂ ಮೇಲ್ಪಟ್ಟು ಹಣ್ಣುಗಳಿರುತ್ತವೆ. 

ರಾಜ ಬಾಳೆ: ಒಂದು ಗೊನೆಯಲ್ಲಿ ಹಣ್ಣುಗಳು ಹೆಚ್ಚಾಗಿದ್ದು ಉದ್ದ ಮತ್ತು ಗಾತ್ರದಲ್ಲಿ ಸುಮಾರಾಗಿವೆ. ಮಾಗಿದ ಹಣ್ಣುಗಳ ಒಳ ತಿರುಳು ಜಾಮ್‍ನಂತಾಗುವುದರಿಂದ, ಹಣ್ಣುಗಳನ್ನು ಬಹಳ ದಿನ ಸಂಗ್ರಹಿಸಿ ಇಡಲಾಗುವುದಿಲ್ಲ. 

	ಬೂದು ಬಾಳೆ (ಹಾವುಬಾಳೆ, ಕರಿಬಾಳೆ): ಮಳೆ ಹೆಚ್ಚು ಬೀಳುವ ಮಲೆನಾಡಿನ ಕಡೆ ಇದರ ಕೃಷಿ ಹೆಚ್ಚು. ಒಂದೊಂದು ಗೊನೆಯಲ್ಲಿ 50-60 ಕಾಯಿಗಳು. ಹಣ್ಣು ರುಚಿಯಾಗಿರುತ್ತದೆ. 

	ಪೂವನ್ ಬಾಳೆ: ದಕ್ಷಿಣ ಭಾರತದ ಬತ್ತ ಬೆಳೆಯುವ ನೆಲದಲ್ಲಿ ಇದನ್ನು ಬೆಳೆಯುವರು. ಗೊನೆಯಲ್ಲಿ ಅನೇಕ ಚಿಪ್ಪುಗಳಿದ್ದು 200ರ ವರೆಗೂ ಹಣ್ಣುಗಳಿರುತ್ತವೆ. ಹಣ್ಣು ಸ್ವಲ್ಪ ಹುಳಿ. ಇದನ್ನೇ ಹೋಲುವ ಪುಟ್ಟ ಬಾಳೆ ಹೆಚ್ಚು ರುಚಿಕರ. 

	ಕ್ಯಾವೆಂಡಿಷ್ ಬಾಳೆ: ಇದಕ್ಕೆ ಪಚ್ಚಬಾಳೆ ಎಂಬ ಹೆಸರೂ ಉಂಟು. ಗಿಡ ಸುಮಾರು 1.5-2 ಮೀ. ಎತ್ತರಕ್ಕೆ ಬೆಳೆಯುವುದು. ಗೊನೆಯಲ್ಲಿ 125-140 ಹಣ್ಣುಗಳಿರುವುವು. ಇಡೀ ವರ್ಷದುದ್ದಕ್ಕೂ ಇದರ ಹಣ್ಣು ಪಡೆಯಬಹುದಾದ್ದರಿಂದ ಹೆಚ್ಚು ಪರಿಚಿತ. 

	ಕೇರಳದಲ್ಲಿ ನೇಂದ್ರ ಬಾಳೆ, ಪಳನಿ ಬೆಟ್ಟಗಳಲ್ಲಿ ವಿರೂಪಾಕ್ಷಿ ಬಾಳೆ, ತಮಿಳುನಾಡಿನ ಬಹುಭಾಗಗಳಲ್ಲಿ, ಪಶ್ಚಿಮ ಬಿಹಾರದಲ್ಲಿ ಪೂವನ್ ಅಥವಾ ಚಂಪಬಾಳೆ, ಮಹಾರಾಷ್ಟ್ರ ಗುಜರಾತುಗಳಲ್ಲಿ ಬಾಸರಾಯ್‍ಬಾಳೆ ಮುಂತಾದವನ್ನು ಅಧಿಕವಾಗಿ ಬೆಳೆಯುವರು. 

	ರೋಗಗಳು: ಬಾಳೆಗೆ ಕೆಲವು ಬೂಷ್ಟುಗಳ ಮತ್ತು ಕೀಟಗಳ ಕಾಟವುಂಟು. ವೀವಿಲ್ (ಚಿಪ್ಪಿನ ಮೂತಿ ಹುಳು) ಎಂಬ ಹುಳು ಗುಪ್ತಕಾಂಡವನ್ನು ಕೊರೆಯುವುದರಿಂದ ಗಿಡ ದುರ್ಬಲವಾಗುತ್ತದೆ. ಬುಡವನ್ನು ಅಗೆದರೆ ಹುಳುವಿನ ಡಿಂಬಗಳು ದೊರೆಯುವುವು. ರೋಗ ಪೀಡಿತ ಗಿಡಗಳನ್ನು ಕಿತ್ತು ಸುಡುವುದು ಕಂದುಗಳನ್ನು ಹೆಪ್ಟಕ್ಲೋರ್, ಕ್ಲೋರೊಡೇನ್, ಮ್ಯಾಲಥಿಯಾನ್ ಮಿಶ್ರಣಗಳಿಂದ ಸಂಸ್ಕರಿಸುವುದು, ಈ ರಾಸಾಯನಿಕಗಳನ್ನೇ ಗಿಡದ ಬುಡಕ್ಕೆ ಸುರಿಯುವುದು ಮುಂತಾದ ಕ್ರಮಗಳಿಂದ ಹುಳುವನ್ನು ನಿಯಂತ್ರಿಸಬಹುದು. 

	ಬೂಷ್ಟು ರೋಗಗಳ ಪೈಕಿ ಹೆಚ್ಚು ವ್ಯಾಪಕವಾಗಿರುವ ಹಾಗೂ ಹಾನಿ ಉಂಟು ಮಾಡುವ ರೋಗ ಎಂದರೆ ಪ್ಯೂಸೇರಿಯಮ್ ಆಕ್ಸಿಸ್ಪೋರಿಯಮ್ ಎಂಬ ಶಿಲೀಂಧ್ರದಿಂದ ಬರುವ ಪನಾಮ ರೋಗ. ಪೂವನ್ ಬಾಳೆ, ರಸಬಾಳೆ, ಸಿರುಮಲೈಬಾಳೆಗಳಿಗೆ ಈ ರೋಗದ ಕಾಟ ಹೆಚ್ಚು. ರೋಗ ತಗುಲಿದರೆ ಎಲೆಗಳು ಒಣಗುತ್ತವೆ. ಮಿಥ್ಯಾಕಾಂಡ ನೀಳವಾಗಿ ಸೀಳುತ್ತದೆ. ಗುಪ್ತಕಾಂಡಕ್ಕೂ ರೋಗ ತಗುಲಿ, ಅದರಿಂದ ಹೊರಡುವ ಕಂದುಗಳಿಗೂ ರೋಗ ಬರುತ್ತದೆ. ಫಸಲು ಬರುವುದಿಲ್ಲ, ಬಂದರೂ ಸಾಧಾರಣ. ನೆಲದಲ್ಲಿ ನೀರು ನಿಂತು ಶೈತ್ಯ ಹೆಚ್ಚಾದರೆ ಈ ರೋಗ ಕಾಣಿಸಿಕೊಳ್ಳುತ್ತದೆ. ರೋಗಪೀಡಿತ ಗಿಡಗಳನ್ನು ಪೂರ್ಣವಾಗಿ ಕಿತ್ತು ನಾಶ ಮಾಡಿ ಬೇರನ್ನು ತೆಗೆದು ಮಣ್ಣು ಮತ್ತು ಸುಣ್ಣವನ್ನು ಸೇರಿಸುವುದಲ್ಲದೆ ಆ ನೆಲದಲ್ಲಿ ಕೆಲವು ವರ್ಷಕಾಲ ಬಾಳೆ ಬೆಳೆಯುವುದನ್ನು ನಿಲ್ಲಿಸುವುದೇ ರೋಗವನ್ನು ಹತೋಟಿಯಲ್ಲಿಡುವ ಮಾರ್ಗ.

	ಸರ್ಕೊಸ್ಪೋರ ಮ್ಯೂಸೇಯಿ: ಇದು ತಗಲಿದರೆ ಎಲೆಗಳ ಮೇಲೆ ನಸು ಹಳದಿ ಬಣ್ಣದ ಮಚ್ಚೆಗಳುಂಟಾಗುವುವು. ರೋಗ ತೀವ್ರವಾದರೆ ಫಸಲಿಗೆ ನಷ್ಟ. ರೋಗ ತಡೆಗಟ್ಟಲು ಬೋರ್ಡೋ ದ್ರಾವಣವನ್ನು ಸಿಂಪಡಿಸುವುದಲ್ಲದೆ ರೋಗ ಪೀಡಿತ ಎಲೆಗಳನ್ನು ಕತ್ತರಿಸಿ ತೆಗೆಯಲಾಗುತ್ತದೆ. 

	ಬಂಗಾಳದಲ್ಲಿ ಹೆಲ್ಮಿಂತೋಸ್ಪೋರಿಯಮ್ ಶಿಲೀಂಧ್ರದಿಂದ ಎಲೆಗಳಿಗೆ ರೋಗ ಕಾಣಿಸಿಕೊಂಡು ಅದು ಎಲ್ಲ ಭಾಗಕ್ಕೂ ಹರಡಿ, ಬುಡ ಕೊಳೆತು ಬೀಳುತ್ತದೆ. ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶಮಾಡುವುದು, ರೋಗ ಕಾಣಿಸಿಕೊಂಡಾಗ ಬೋರ್ಡೋ ದ್ರಾವಣ ಸಿಂಪಡಿಕೆ ಮುಂತಾದವು ರೋಗ ನಿಯಂತ್ರಣದ ಮಾರ್ಗಗಳು. 

	ಮೈಸೂರಿನಲ್ಲಿ ರಸಬಾಳೆ ಮತ್ತು ಮದರಂಗ ಬಾಳೆಯ ಮಿಥ್ಯಾಕಾಂಡಗಳಿಗೆ ಸ್ಕ್ಲೀರೋಷಿಯಮ್ ರೋಲ್ಪಿಸಿ ಎಂಬ ಶಿಲೀಂಧ್ರದ ಕಾಟ ಉಂಟು. ರೋಗ ಬಂದಾಗ ಕಾಂಡ ನೀಳವಾಗಿ ಸೀಳುವುದಲ್ಲದೆ ಎಲೆಗಳು ಹಳದಿ ವರ್ಣ ತಳೆದು ಕೆಳಮುಖವಾಗಿ ತಿರುಗಿ ಒಣಗುತ್ತವೆ. ಬೋರ್ಡೋ ದ್ರಾವಣವನ್ನು ಬುಡಕ್ಕೆ ಚೆನ್ನಾಗಿ ಮೆತ್ತುವುದರ ಮೂಲಕ ರೋಗವನ್ನು ಹತೋಟಿಗೆ ತರಬಹುದು. ರೋಗ ಹಿಡಿದ ಎಲೆಗಳನ್ನು ತತ್‍ಕ್ಷಣ ತೆಗೆದು ಸುಡುವುದು ಉಂಟು. 

	ಬಾಳೆಗೆ ವೈರಸ್ ರೋಗದ ಬಾಧೆಯೂ ಉಂಟು. ಇದು ಬಂದರೆ ಗಿಡ ಎತ್ತರಕ್ಕೆ ಬೆಳೆಯದು. ಎಲೆಗಳು ಚಿಕ್ಕದಾಗಿ ಸುಳಿಯಲ್ಲಿ ಗುಂಪಾಗುತ್ತವೆ. ಇದು ಕೇರಳ, ಅಸ್ಸಾಮ್‍ಗಳಿಂದ ಇತರ ಭಾಗಗಳಿಗೂ ಹರಡಿದೆ. ರೋಗ ಪೀಡಿತ ಗಿಡಗಳನ್ನು ಕಿತ್ತು ನಾಶಮಾಡುವುದೊಂದೇ ನಿಯಂತ್ರಣದ ಮಾರ್ಗ. ಆರೋಗ್ಯವಾಗಿರುವ ಬಾಳೆ ತೋಟಕ್ಕೂ ರೋಗ ಪೀಡಿತ ಕಂದುಗಳ ಮೂಲಕ ರೋಗ ಹರಡುವುದಾದ್ದರಿಂದ ಇಂಥ ರೋಗ ಪೀಡಿತ ತೋಟಗಳಿಂದ ಕಂದುಗಳನ್ನು ತರುವುದಿಲ್ಲ. 

	ಬಾಳೆಹಣ್ಣು ಬಲು ಜನಪ್ರಿಯ ಹಣ್ಣು. ತರಕಾರಿಯಾಗಿ ಕೂಡ ಇದಕ್ಕೆ ವಿಶಿಷ್ಟ ಸ್ಥಾನವಿದೆ. ಇದರಿಂದಾಗಿ ಬಾಳೆಯನ್ನು ತೋಟಗಳಲ್ಲಿ ಮನೆಯ ಹಿತ್ತಲಗಳಲ್ಲಿ ಬೆಳೆಸುತ್ತಾರೆ. ಕೇರಳ, ಪೆಸಿಫಿಕ್ ಸಾಗರದ ಕೆಲವು ದ್ವೀಪಗಳು ಮತ್ತು ಮಧ್ಯ ಆಫ್ರಿಕದ ಜನಗಳಿಗೆ ಇದು ಮುಖ್ಯ ಆಹಾರವೇ ಆಗಿದೆಯೆನ್ನಬಹುದು. ಹಣ್ಣುಗಳನ್ನು ಊಟದ ನಂತರ ತಿನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಲ್ಲದೆ ಹಣ್ಣಿನ ತಿರುಳನ್ನು ಒಣಗಿಸಿ, ಹಿಟ್ಟಿನ ರೂಪದಲ್ಲಿ ಕೂಡಿಡುವುದುಂಟು. ತಿರುಳಿನಿಂದ ರಸಾಯನ, ಪಂಚಾಮೃತ, ಸಕ್ಕರೆ ಹಚ್ಚಿದ ಹೋಳು, ಜಾಮ್, ಜೆಲ್ಲಿಗಳನ್ನು ತಯಾರಿಸುವುದಿದೆ. ಚೆನ್ನಾಗಿ ಬಲಿತ ಕಾಯಿಗಳಿಂದ ಉಪ್ಪೇರಿ (ಚಿಪ್ಸ್) ಮಾಡುವುದುಂಟು. ನೇಂದ್ರಬಾಳೆ ಇದಕ್ಕೆ ಒಳ್ಳೆಯದು. 

	ಮಾಗಿದ ಹಣ್ಣಿನಲ್ಲಿ ಪಿಷ್ಟಾದಿಗಳು ಹೆಚ್ಚು ಮೊತ್ತದಲ್ಲೂ ಲೋಹಾಂಶ ಮತ್ತು ವಿಟಮಿನ್ನುಗಳು ತಕ್ಕಮಟ್ಟಿನ ಮೊತ್ತದಲ್ಲೂ ಉಂಟು. ಹಣ್ಣಿನ ರಾಸಾಯನಿಕ ಸಂಯೋಜನೆ ತಳಿ ಮತ್ತು ಹಣ್ಣು ಬೆಳೆದ ಶ್ರಾಯವನ್ನು ಅವಲಂಬಿಸಿ ಕೊಂಚ ವ್ಯತ್ಯಾಸವಾಗುವುದಾದರೂ ಸಾಮಾನ್ಯವಾಗಿ ತಿರುಳಿನಲ್ಲಿ 60-80% ತೇವಾಂಶ, 0.4-1.7% ಪ್ರೋಟಿನ್, 3.6-14.6% ಸಕ್ಕರೆ ಅಂಶ, 0.9-8.2% ಪಿಷ್ಟ ನಾರು ಇತ್ಯಾದಿ ಇವೆ. ಬಾಳೆ ಹಣ್ಣಿನ ಖಾದ್ಯಯೋಗ್ಯ ಭಾಗ ಹಣ್ಣಿನ 91% ರಷ್ಟಿರುವುದುಂಟು. 

	ಬಾಳೆಕಾಯಿ ಮಾಗುತ್ತ ಬಂದಂತೆ ಅದರಲ್ಲಿಯ ಪಿಷ್ಟಭಾಗ ಸಕ್ಕರೆಯಾಗಿ ಪರವರ್ತಿತವಾಗುತ್ತದೆ. ಸಕ್ಕರೆಯ ಮೊತ್ತ ಕಾಯಿಯಲ್ಲಿ 1%-2% ರಷ್ಟಿದ್ದರೆ ಹಣ್ಣಿನಲ್ಲಿ 15%_20% ರಷ್ಟಿರುತ್ತದೆ. ಸಕ್ಕರೆಗಳಲ್ಲಿ ಗ್ಲೂಕೋಸ್, ಫ್ರಕ್ಟೋಸಗಳೇ ಮುಖ್ಯ ರೀತಿಯವು. 

	ಬಾಳೆಯಲ್ಲಿ ಸುಮಾರು 4.2% ಕ್ಯಾಲ್ಸಿಯಮ್ ಪೆಕ್ಟೇಟ್ ರೂಪದ ಪೆಕ್ಟಿನ್ ಇದೆ. ಹಣ್ಣಾಗುತ್ತಿದ್ದಂತೆ ಕರಗದ ಕ್ಯಾಲ್ಸಿಯಮ್ ಪೆಕ್ಟೇಟ್ ಕರಗುವಂಥ ವಸ್ತುವಾಗಿ ಪರಿವರ್ತಿತವಾಗುತ್ತವೆ. ಹೆಮಿಸೆಲುಲ್ಯೋಸ್ ವಸ್ತುವಿನ ಮೊತ್ತ ಕಡಿಮೆಯಾಗುತ್ತದೆ. 

	ಬಾಳೆಯಲ್ಲಿಯ ಮುಖ್ಯ ಪ್ರೋಟೀನಗಳು ಆಲ್ಬುಮಿನ್ ಮತ್ತು ಗ್ಲಾಬ್ಯುಲಿನ್ ಇವುಗಳ ಜೊತೆಗೆ ಗ್ಲೂಟೆಲಿನ್, ಪ್ರೋಲಮೈನ್ ಮತ್ತು ಪ್ರೋಟಿಯೊಸ್ ಕೂಡ ಉಂಟು. ಮಾಗಿದ ಹಣ್ಣಿನಲ್ಲಿ ಮುಕ್ತ ರೀತಿಯ ಅರ್ಜಿನಿನ್, ಆಸ್ಪರಜಿನ್, ಆಸ್ಪಾರ್ಟಿಕ್ ಆಮ್ಲ, ಗ್ಲೂಟಮೈನ್, ಲ್ಯೂಸಿಸ್ ಮುಂತಾದ ಅಮೈನೊ ಆಮ್ಲ ಇವೆ. ಕ್ಯಾಲ್ಸಿಯಮ್ ಮತ್ತು ಕಬ್ಬಿಣಗಳು ತಕ್ಕಮಟ್ಟಿಗೂ ಪೊಟ್ಯಾಸಿಯಮ್, ಮೆಗ್ನೀಶಿಯಮ್, ಸೋಡಿಯಮ್ ಮತ್ತು ರಂಜಕ ಅಧಿಕವಾಗಿಯೂ ಇವೆ.

	ಬಾಳೆಯಲ್ಲಿರುವ ವಿಟಮಿನ್‍ಗಳಲ್ಲಿ ಥಯಾಮಿನ್, ಆಸ್ಕಾರ್ಬಿಕ್ ಆಮ್ಲ ಮುಖ್ಯವಾದುವು. ಅಲ್ಲದೆ ಪಿರಿಡಾಕ್ಸಿನ್, ಪ್ಯಾಂಟೋಥಿನಿಕ್ ಆಮ್ಲ, ಬಯೋಟಿನ್, ಇನೋಸಿಟಾಲ್, ಫೋಲಿಕ್ ಆಮ್ಲ ಇವೂ ಉಂಟು. 

	ಬಾಳೆಹಣ್ಣಿನ ವಿಶಿಷ್ಟ ವಾಸನೆ ಮತ್ತು ರುಚಿಗಳು ಹಣ್ಣು ಮಾಗುವಾಗ ರೂಪುಗೊಳ್ಳುತ್ತವೆ. ವಾಸನೆಗೆ ಆಮೈಲ್ ಅಸಿಟೇಟ್ ಕಾರಣ. ಮಾಗಿದ ಹಣ್ಣುಗಳಲ್ಲಿ ಮುಕ್ತರೂಪದ ಮ್ಯಾಲಿಕ್ ಆಮ್ಲ, ಸಿಟ್ರಿಕ್ ಆಮ್ಲ ಮತ್ತು ಆಕ್ಸಾಲಿಕ್ ಆಮ್ಲಗಳುಂಟು.

	ಆಮೈಲೇಸ್, ಇನ್ವರ್ಟೇಸ್, ಪ್ರೋಟಿಯೇಸ್, ಕ್ಯಾಟಲೇಸ್, ಪರಾಕ್ಸಿಡೇಸ್, ರೈಪೇಸ್, ಆಕ್ಸಿಜಿನೇಸ್, ಫಾಸ್ಕಾಟೇಸ್ ಮತ್ತು ಆಕ್ಸಾರ್ಬಿಕ್ ಆಕ್ಸಿಡೇಸ್ ಇವು ಇದರಲ್ಲಿರುವ ಕಿಣ್ವಗಳು. ಇವುಗಳ ಕ್ರಿಯೆಯಲ್ಲಿ ಹಣ್ಣು ಮಾಗುವಾಗ ವ್ಯತ್ಯಾಸಗಳು ಕಂಡುಬರುತ್ತವೆ. ಹಣ್ಣು ಮಾಗುವಾಗ ಕ್ಯಾಟಲೇಸ್ ಕ್ರಿಯೆ ಕಡಿಮೆಗೊಳ್ಳುತ್ತ ಬಂದು ಇನ್‍ವರ್ಟೇಸ್ ಕ್ರಿಯೆ ವೃದ್ಧಿಗೊಳ್ಳುತ್ತದೆ. 

	ಬಾಳೆಕಾಯಿಯಲ್ಲಿ ಟ್ಯಾನಿನ್ ಇರುವುದರಿಂದ ಇದಕ್ಕೆ ಒಗರು ರುಚಿಯುಂಟು. ಮಾಗುವಾಗ ಇದು ನಾಶವಾಗುತ್ತದೆ. 

	ಬಾಳೆಕಾಯಿಯ ಸಿಪ್ಪೆ ಮತ್ತು ತಿರುಳುಗಳಲ್ಲಿ ಬೂಷ್ಟು ನಿರೋಧಕ ವಸ್ತು ಉಂಟು. ಮಾಗಿದ ಹಣ್ಣಿನ ಸಿಪ್ಪೆ ಮತ್ತು ತಿರುಳಿನಲ್ಲಾದರೊ ಜೊತೆಗೆ ಬ್ಯಾಕ್ಟೀರಿಯ ನಿರೋಧಕ ವಸ್ತುವೂ ಇದೆ. 

	ಬಾಳೆಯ ಅರಳದ ಗಂಡು ಮತ್ತು ನಪುಂಸಕ ಹೂಗಳನ್ನು ಕೂಡ ತರಕಾರಿಯಾಗಿ ಉಪಯೋಗಿಸುವುದಿದೆ. ಹೂಗಳಲ್ಲಿ ಬ್ಯಾಕ್ಟೀರಿಯ ನಿರೋಧಕ ವಸ್ತುವುಂಟು. 

	ಗೊನೆಯನ್ನು ಕತ್ತರಿಸಿದ ಮೇಲೆ ಬಾಳೆಯ ಪಟ್ಟೆಯನ್ನು ಬಿಡಿಸಿದಾಗ ಗಟ್ಟಿಯಾದ ಬಾಳೆ ದಿಂಡು ಸಿಕ್ಕುತ್ತದೆ. ಇದು ಕೂಡ ತರಕಾರಿಯಾಗಿ ಉಪಯುಕ್ತ. ಉಳಿದ ಎಲೆ ಮತ್ತು ಕಾಂಡಗಳು ದನಗಳಿಗೆ ಆಹಾರ. ಬಾಳೆಎಲೆಗಳನ್ನು ಊಟದ ತಟ್ಟೆಯಾಗಿ ಉಪಯೋಗಿಸುವರು. ಒಣಗಿದ ಎಲೆ ಮತ್ತು ಬಾಳೆ ಪಟ್ಟೆಗಳನ್ನು ಒಣಗಿಸಿ, ಹೂ, ವೀಳೆದೆಲೆ ಹಣ್ಣುಗಳನ್ನು ಕಟ್ಟಲು ಉಪಯೋಗಿಸುವುದಿದೆ. 

	ಬಾಳೆಹಣ್ಣು ಮಲಬದ್ಧತೆಯನ್ನು ನಿವಾರಿಸುತ್ತದೆ. ಹಾಗೆಯೇ ಭೇದಿ ಮತ್ತು ಆಮಶಂಕೆಗಳನ್ನು ಕಡಿಮೆ ಮಾಡಲು ಕೆಲವು ಜಾತಿಯ ಹಣ್ಣುಗಳು ಸಹಕಾರಿ. ಕರುಳಿನಲ್ಲಿ ಹುಣ್ಣಿದ್ದರೆ ಮಾಯಲು ಇದು ಸಹಾಯಕ. ಮಕ್ಕಳ ಆಹಾರದಲ್ಲಿ ಬಾಳೆಯ ಷರಬತ್ತನ್ನು ಸೇರಿಸಿಕೊಡುವರು. 

	ಮಧುಮೂತ್ರ, ಮೂತ್ರರಕ್ತ ವಿಕಾರ, ಮೂತ್ರಪಿಂಡದ ಉರಿಯೂತ, ಸಂಧಿವಾತ, ರಕ್ತಒತ್ತಡ, ಹೃದಯದ ತೊಂದರೆಗಳು-ಈ ರೋಗಗಳಿಗೆ ಬಾಳೆ ಉತ್ತಮ ಔಷಧಿಯೆನ್ನಲಾಗಿದೆ. 

	ಬೇರಿನ ಬೂದಿ ಇಲ್ಲವೆ ಗಿಡದ ಬೂದಿ ಕರುಳಿನಲ್ಲಿರುವ ಕ್ರಿಮಿಗಳನ್ನು ನಾಶಮಾಡುತ್ತದೆ.
(ಎಚ್.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ